ಎಂಜಿಎಂ ಕಾಲೇಜು ಉಡುಪಿ: ೬೯ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ
ಉಡುಪಿ, ನವೆಂಬರ್ ೧,
೬೯ನೇ ಕರ್ನಾಟಕ ರಾಜ್ಯೋತ್ಸವವನ್ನು ಎಂಜಿಎಂ ಕಾಲೇಜಿನಲ್ಲಿ ಆಚರಿಸಲಾಯಿತು. ಕನ್ನಡ ನಾಡು ನುಡಿ ಹಾಗೂ ಹಿರಿಮೆ ಗರಿಮೆಗಳ ಬಗ್ಗೆ ಹಿರಿಯ ಸಾಹಿತಿ ಹಾಗೂ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಕಾತ್ಯಾಯನಿ ಕುಂಜಿಬೆಟ್ಟು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ನಾಡು ನುಡಿಯ ಸೊಗಸಿನ ಬಗ್ಗೆ ಆದಿಕವಿ ಪಂಪನಿಂದ ಆರಂಭಿಸಿ ಈ ತನಕದ ಕವಿಗಳು ನೀಡಿರುವ ಕೆಲವು ವರ್ಣನೆಗಳ ಬಗ್ಗೆ ಅವರು ಉಲ್ಲೇಖಿಸಿದರು. ಕನ್ನಡದ ಮಹತ್ವದ ಬಗ್ಗೆ ಕನ್ನಡಿಗರಿಗೆ ಇರಬೇಕಾದ ಭಾವನೆಗಳತ್ತ ಬೆಳಕು ಚೆಲ್ಲಿದರು. ಪ್ರತಿ ಮಗುವಿಗೂ ಕನ್ನಡದ ಪ್ರಜ್ಞೆ ಮನೆಯಿಂದಲೇ ಆರಂಭವಾಗುತ್ತದೆ ಆದರೆ ಅದು ಮುಂದೆಯೂ ಉಳಿದು ಬೆಳೆಯಬೇಕು ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷೀನಾರಾಯಣ ಕಾರಂತ ಅವರು ಕನ್ನಡ ತಾಯಿ ಭುವನೇಶ್ವರಿಯನ್ನು ಸ್ಮರಿಸಿಕೊಂಡು ಕನ್ನಡದ ನಾಡ ಧ್ವಜದ ಮಹತ್ವದ ಬಗ್ಗೆ ತಿಳಿಸಿ ಹೇಳಿದರು. ನಮ್ಮ ರಾಷ್ಟ್ರಧ್ವಜಕ್ಕೆ ಗೌರವವನ್ನು ಸಲ್ಲಿಸಿ ಕನ್ನಡದ ಧ್ವಜಕ್ಕೂ ಗೌರವವನ್ನು ಸಲ್ಲಿಸಬೇಕು ಎಂದು ಕರೆ ನೀಡಿದರು. ಕನ್ನಡದ ಧ್ವಜದಲ್ಲಿರುವ ಬಣ್ಣಗಳಿಗೂ ಹಿರಿದಾದ ಅರ್ಥ ಇದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.
ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಚನ್ನ ಪೂಜಾರಿ ಸಂದರ್ಭೋಚಿತ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಅನ್ವಿತಾ, ಉಜ್ವಲ್, ಮತ್ತು ಮೋಹಿತ್ ಕನ್ನಡಾಭಿಮಾನದ ನಾಡಭಕ್ತಿ ಗೀತೆಗಳನ್ನು ಹಾಡಿದರು.
ಕನ್ನಡದ ಧ್ವಜ, ನೆಲ, ಜಲ, ಭಾಷೆ, ಸಂಕೇತಗಳು ಸಾರುವ ಸಂದೇಶಗಳನ್ನು ಹಾಗೂ ನಾಡುನುಡಿಗಾಗಿ ಸೇವೆ ಸಲ್ಲಿಸಿದ ಕವಿಗಳನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸಿಕೊಂಡು ವಂದಿಸಲಾಯಿತು.
ಗಾಂಧಿ ಅಧ್ಯಯನ ಕೇಂದ್ರದ ವಿನೀತ್ ರಾವ್ ಕಾರ್ಯಕ್ರಮ ಸಂಯೋಜಿಸಿ ಧನ್ಯವಾದ ಸಮರ್ಪಣೆ ಮಾಡಿದರು.
No comments:
Post a Comment